ವೀಲರ್, ಮಾರ್ಟಿಮರ್
	1889-1976. ಪ್ರಸಿದ್ಧ ಪುರಾತತ್ತ್ವಜ್ಞ. ಈತ ಪ್ರಪಂಚದ ವಿವಿಧ ಭಾಗಗಳಲ್ಲಿ ಉತ್ಖನನ ನಡೆಸಿ ಇತಿಹಾಸ ಗರ್ಭದಲ್ಲಡಗಿದ್ದ ರಹಸ್ಯಗಳನ್ನು ಬಯಲು ಮಾಡಿದ ವಿರಳರಲ್ಲಿ ಒಬ್ಬನೆಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ. ಭಾರತದಲ್ಲಿ ಈತ ನಡೆಸಿದ ಉತ್ಖನನಗಳು ಮತ್ತು ಮಾಡಿದ ವಿಶ್ಲೇಷಣೆಗಳು ಭಾರತದ ಇತಿಹಾಸ ಪೂರ್ವ ಕಾಲದ ಅಧ್ಯಯನಕ್ಕೆ ಹೊಸ ತಿರುವು ನೀಡಿದುವು.

	ರಾಬರ್ಟ್ ಎರಿಕ್ ಮಾರ್ಟಿಮರ್ ವೀಲರ್ ಎಂಬುದು ಇವನ ಪೂರ್ಣ ಹೆಸರು. ಸ್ಕಾಟ್ಲೆಂಡಿನ ಗ್ಲಾಸ್ಗೋ ನಗರದಲ್ಲಿ 1889ರಲ್ಲಿ ಜನಿಸಿದ. ತಂದೆ ಯಾರ್ಕ್‍ಷೈರಿನ ಪತ್ರಿಕೆಯೊಂದರ ಉಪಸಂಪಾದಕನಾಗಿದ್ದ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಈತ ವಿದ್ಯಾಭ್ಯಾಸ ನಡೆಸಲು ಕಷ್ಟಪಡಬೇಕಾಯಿತು. ತಂದೆ ಲಂಡನ್‍ನಲ್ಲಿ ನೆಲೆಸಿದ್ದರಿಂದ ಅಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶವಾಯಿತು. ನಿರಂತರ ಶ್ರಮ ಮತ್ತು ಪ್ರೋತ್ಸಾಹಗಳಿಂದ ಎಂ.ಎ. ಪದವಿ ಗಳಿಸಿದ(1912). ಅನಂತರ ವಿವಾಹವಾದ(1914).

	ಅಗಸ್ಟಸ್ ವೊಲ್ಲಸ್ಟನ್ ಫ್ರಾಂಕ್ಸ್ ಸ್ಮಾರಕ ಪುರಾತತ್ತ್ವ ನಿಧಿಯಿಂದ ಇವನಿಗೆ ಬ್ರಿಟನ್‍ನಲ್ಲಿ ದೊರೆಯುವ ರೋಮನ್ ಕುಂಭಗಳ ಅಧ್ಯಯನ ಕುರಿತು ಸಂಶೋಧನ ವಿದ್ಯಾರ್ಥಿವೇತನ ದೊರೆಯಿತು(1913). ಒಂದನೆಯ ಮಹಾಯುದ್ಧ ಪ್ರಾರಂಭವಾದ್ದರಿಂದ ಸಂಶೋಧನೆಗೆ ತೊಡಕು ಉಂಟಾಯಿತು. ವಿಶ್ವವಿದ್ಯಾಲಯ ಕಾಲೇಜಿನ ವಾಸ್ತುಶಿಲ್ಪ ಶಾಲೆಯಲ್ಲಿ ರಾತ್ರಿ ಹೊತ್ತು ಕೆಲಸ ಮಾಡುತ್ತಿದ್ದ. ಮಹಾಯುದ್ಧದಲ್ಲಿ ರಾಯಲ್ ಆರ್ಟಲರಿ ಪಡೆಗೆ ಸೇರಿದ. 1917ರಲ್ಲಿ ಫ್ರಾನ್ಸಿಗೆ ತಲೆತಪ್ಪಿಸಿಕೊಂಡು ಹೋಗಿ ಅಲ್ಲಿಂದ ಲಂಡನ್ನಿಗೆ ಹಿಂದಿರುಗಿದ(1919).

	ಅನಂತರ ಇವನ ವೃತ್ತಿಜೀವನ ಆರಂಭವಾಯಿತು(1919). ಇಂಗ್ಲೆಂಡಿನ ರಾಯಲ್ ಕಮಿಷನ್ ಆಫ್ ಹಿಸ್ಟಾರಿಕಲ್ ಮಾನ್ಯುಮೆಂಟ್ಸ್ ಎಂಬ ಸಂಸ್ಥೆಯಲ್ಲಿ ಕಿರಿಯ ಸಂಶೋಧಕನಾಗಿ ನೇಮಕಗೊಂಡ. ಪ್ರಾರಂಭದಲ್ಲಿ ಪ್ಲೆಷೆ, ಎಸೆಕ್ಸ್, ಕಾಲ್ಚಸ್ಟರ್ ಮತ್ತು ಸೆಂಗಾಟಿಯ್ ಮೊದಲಾದ ರೋಮನ್ ನೆಲೆಗಳಲ್ಲಿ ಪರಿಶೋಧನೆ ನಡೆಸಿದ. ಈತ ನಡೆಸುತ್ತಿದ್ದ ಉತ್ಖನನ ಮತ್ತು ಬರೆಯುತ್ತಿದ್ದ ಸಂಶೋಧನ ಲೇಖನಗಳು ವಿದ್ವಾಂಸರ ಗಮನಸೆಳೆದುವು. ಕಾರ್ಡಿಫ್ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಪುರಾತತ್ತ್ವ ಅಧ್ಯಾಪಕನಾಗಿ ನೇಮಕವಾದ. ಬಡ್ತಿ ಪಡೆದು ವೇಲ್ಸ್‍ನ ನ್ಯಾಷನಲ್ ಮ್ಯೂಸಿಯಮ್‍ನ ನಿರ್ದೇಶಕನಾದ. ಈತ ಲಂಡನ್ನಿನ ವಸ್ತುಸಂಗ್ರಹಾಲ ಯಕ್ಕೆ ವ್ಯವಸ್ಥಿತ ರೂಪುಕೊಟ್ಟ. ಇವನ ಪತ್ನಿ ತೆಸ್ಸಾ ಇವನ ಎಲ್ಲಾ ಪುರಾತತ್ತ್ವ ಶೋಧನೆ ಗಳಲ್ಲಿ ಮುಖ್ಯ ಸಹಾಯಕಿ ಯಾಗಿ ನೆರವು ನೀಡಿದಳು. ಪುರಾತತ್ತ್ವ ವಸ್ತುಗಳ ಸೂಚಿ ಪಟ್ಟಿಗಳನ್ನು ಸಿದ್ಧಪಡಿಸಿದ(1927). 1937ರಲ್ಲಿ ಈತನ “ಇನ್‍ಸ್ಟಿಟ್ಯೂಟ್ ಆಫ್ ಆರ್ಕಿಯಾಲಜಿ” ಅಸ್ತಿತ್ವಕ್ಕೆ ಬಂದಿತು.

	ಇವನ ಕಾರ್ಯದಕ್ಷತೆ ಮತ್ತು ವಿದ್ವತ್ತನ್ನು ಅರಿತಿದ್ದ ಲಿಯೋನಾರ್ಡ್ ವೂಲಿ ಎಂಬ ವಿದ್ವಾಂಸ ಇವನನ್ನು ಭಾರತಕ್ಕೆ ಆಹ್ವಾನಿಸಬೇಕೆಂದು ವೈಸ್‍ರಾಯ್‍ಗೆ ಸಲಹೆ ನೀಡಿದ. ಈಸ್ಟ್ ಇಂಡಿಯ ಕಂಪನಿಯ ಆಹ್ವಾನದ ಮೇರೆಗೆ ಈತ ಭಾರತಕ್ಕೆ ಬಂದ. ಭಾರತೀಯ ಪುರಾತತ್ತ್ವ ಇಲಾಖೆಯ ಪುನಶ್ಚೇತನಕ್ಕೆ ಹೊಸ ಕಾರ್ಯ ಯೋಜನೆ ಹಾಕಿಕೊಂಡ. 1775ರ ತರುವಾಯದ ಭಾರತದಲ್ಲಿನ ರೋಮನ್ ನಾಣ್ಯಗಳ ಪಟ್ಟಿ ತಯಾರಿಸಿದ. ಹಿಂದಿನ ವಿದ್ವಾಂಸರು ಕೈಗೊಂಡಿದ್ದ ಹರಪ್ಪದ ಕೆಲವು ದಿಬ್ಬಗಳನ್ನು ಪುನರ್ ಉತ್ಖನನಕ್ಕೆ ಆರಿಸಿಕೊಂಡ(1944). ಹರಪ್ಪದ ನೆಲೆಯನ್ನು ವ್ಯವಸ್ಥಿತವಾಗಿ ಬಿಡಿಸಿ ಅಲ್ಲಿನ ಕೋಟೆಕೊತ್ತಲಗಳನ್ನು ಪತ್ತೆಹಚ್ಚಿದ. ಪಾಟ್ನಾದಲ್ಲಿ ಸಭೆ ಸೇರಿದ್ದ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯಲ್ಲಿ ಪುರಾತತ್ತ್ವಶಾಸ್ತ್ರದ ಬಗ್ಗೆ ವೈಜ್ಞಾನಿಕ ತರಬೇತಿಯ ಅಗತ್ಯವನ್ನು ಒತ್ತಿ ಹೇಳಿದ.

	ಮದರಾಸಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿನ ಒಂದು ಕುಂಭದ ಕಂಠಭಾಗ ಈತನ ಗಮನ ಸೆಳೆಯಿತು. ಅದು ಸ್ಥಳೀಯ ಪ್ರದೇಶದ್ದಾಗಿರ ಲಿಲ್ಲ, ಬದಲಾಗಿ ಇವನಿಗೆ ಚೆನ್ನಾಗಿ ಪರಿಚಿತವಿದ್ದ ರೋಮನ್ ತಯಾರಿಕೆಯದಾಗಿತ್ತು. ಇದರಿಂದ ಚಕಿತಗೊಂಡ ಈತ ಇತರೆಡೆ ದೊರೆಯಬಹುದಾದ ಈ ಬಗೆಯ ಅವಶೇಷಗಳನ್ನು ಕ್ರೋಡೀಕರಿಸಲು ಆಸಕ್ತಿ ತೋರಿದ. ಇದರಿಂದ ಈಗಾಗಲೇ ಈ ನೆಲದಲ್ಲಿ ಕಂಡು ಬಂದಿದ್ದ ರೋಮನ್ ನಾಣ್ಯಗಳು ಮತ್ತು ಈ ಮಣ್ಣಿನ ತಯಾರಿಕೆಗಳು ರೋಮನ್ ಮತ್ತು ಭಾರತದ ನಡುವಿನ ಪ್ರಾಚೀನ ಸಂಪರ್ಕಕ್ಕೆ ಸಾಕ್ಷಿಗಳಾ ಗಿರುವುದನ್ನು ತಿಳಿಯಪಡಿಸಿದ.

	ಈತ ಐರೋಪ್ಯ ತಜ್ಞರು ಮತ್ತು ಭಾರತದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಕೂಡಿಕೊಂಡು ತಕ್ಷಶಿಲೆಯಲ್ಲಿ ಪರಿಶೋಧನೆ ನಡೆಸಿದ(1944-45). ಇದರಿಂದ ಉತ್ಖನನ ಕಾಲದಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ವಿಧಾನಗಳು ಮತ್ತು ಅವಶೇಷಗಳ ವ್ಯವಸ್ಥಿತ ಜೋಡಣೆಯ ಬಗ್ಗೆ ಭಾರತೀಯ ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದರ್ಶನ ದೊರಕಿತು. ಇದರಿಂದಾಗಿ ಭಾರತದಲ್ಲಿ ಪುರಾತತ್ತ್ವಶಾಸ್ತ್ರದ ಬಗ್ಗೆ ಒಂದು ಹೊಸ ಜಾಗೃತಿ ಮೂಡಲು ಕಾರಣವಾಯಿತು. ಮೊದಲ ಪತ್ನಿಯ ಮರಣದ ಅನಂತರ ಈತ ಮಾರ್ಗರೆಟ್‍ಳನ್ನು ವಿವಾಹವಾದ(1945). ಈಕೆ ತೆಸ್ಸಾಳಂತೆ ಪುರಾತತ್ತ್ವ ಶೋಧನೆಯಲ್ಲಿ ಇವನಿಗೆ ನೆರವಾದಳು.

	ಅರಿಕಮೇಡುವಿನಲ್ಲಿ ದೊರೆತ ಒಂದು ರೋಮನ್ ಮಣಿಯಿಂದ ಪ್ರಭಾವಿತನಾದ ಈತ ಅಲ್ಲಿ ಉತ್ಖನನ ನಡೆಸಿದ(1945). ಇಲ್ಲಿ ಅನೇಕ ಅಮೂಲ್ಯ ಅವಶೇಷಗಳು ದೊರೆತವು. ಏನ್ಷಿಯೆಂಟ್ ಇಂಡಿಯ ಸಂಪುಟದಲ್ಲಿ ಈ ಬಗ್ಗೆ ವರದಿ ಇದೆ(1946). ಕರ್ನಾಟಕದ ಬ್ರಹ್ಮಗಿರಿ ಯಲ್ಲಿ ನಡೆಸಿದ ಉತ್ಖನನ ಮೌಲಿಕವಾದದ್ದು(1945). ಅದೇ ವರ್ಷ ಈತ ಚಂದ್ರವಳ್ಳಿಯತ್ತ ಗಮನಹರಿಸಿದ. ಇಲ್ಲಿ ಹಿಂದೆ ಎಮ್.ಎಚ್.ಕೃಷ್ಣ  ಉತ್ಖನನ ನಡೆಸಿದ್ದರೂ ಅದು ಸಮಗ್ರವಾಗಿರಲಿಲ್ಲ. ಈತ ನಡೆಸಿದ ಉತ್ಖನನದಿಂದ ಇಲ್ಲಿ ಮೂರು ಸ್ತರಗಳ ಸಂಸ್ಕøತಿ ಕಂಡು ಬಂದಿತು (1946). ಇದು ದಕ್ಷಿಣ ಭಾರತದ ಇತಿಹಾಸಪೂರ್ವ ಕಾಲಾನುಕ್ರಮಣಿಕೆ ಯನ್ನು ಗುರುತಿಸುವಲ್ಲಿ ದೃಢಸಾಕ್ಷ್ಯಾಧಾರಗಳನ್ನು ಒದಗಿಸಿತು. ಇಲ್ಲಿಯೂ ಮೇಲ್ಪದರದಲ್ಲಿ ರೋಮನ್ ನಾಣ್ಯಗಳೂ ಮತ್ತಿತರ ಅವಶೇಷಗಳೂ ಲಭಿಸಿದುವು. ಇದು ಒಂದನೆಯ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದೊಂದಿಗೆ ಭಾರತ ಪರ್ಯಾಯ ದ್ವೀಪ ಹೊಂದಿದ್ದ ವ್ಯಾಪಾರ ವಾಣಿಜ್ಯ ಸಂಪರ್ಕಕ್ಕೆ ಅತ್ಯುತ್ತಮ ನಿದರ್ಶನವಾಯಿತು. 

	ಭಾರತ ಸ್ವಾತಂತ್ರ್ಯ ಪಡೆದ ಅನಂತರ ಈತ ಸೇವೆಯಿಂದ ನಿವೃತ್ತನಾದ (1948). ಪಾಕಿಸ್ತಾನ ಸರ್ಕಾರದ ಆಹ್ವಾನದ ಮೇಲೆ ಪುರಾತತ್ತ್ವ ವಿಷಯಗಳ ಸಲಹೆಗಾರನಾಗಿ ಮೂರು ವರ್ಷಗಳ ಅವಧಿಗೆ ನೇಮಕ ವಾದ. ಪಾಕಿಸ್ತಾನದಲ್ಲಿ ವಿವಿಧ ನಿವೇಶನಗಳಲ್ಲಿ ಉತ್ಖನನ ನಡೆಸಿದ (1949-50). ಇವನ ಮಾರ್ಗದರ್ಶನದಲ್ಲಿ ಪಾಕಿಸ್ತಾನದಲ್ಲಿ ಒಂದು ರಾಷ್ಟ್ರೀಯ ವಸ್ತುಸಂಗ್ರಹಾಲಯ ಸ್ಥಾಪನೆಯಾಯಿತು.

	ತರುವಾಯ ಪೂರ್ವ ಆಫ್ರಿಕಕ್ಕೆ ಹೋಗಿ ಅಲ್ಲಿ ವಸ್ತುಸಂಗ್ರಹಾಲಯ ವನ್ನು ಸ್ಥಾಪಿಸಿದ(1956). ಪೇಷಾವರದ ಬಳಿಯ ಚರ್ಸದ ಎಂಬ ನಿವೇಶನದಲ್ಲಿ ಉತ್ಖನನ ನಡೆಸಿ ಇದೇ ಪ್ರಾಚೀನ ಗಾಂಧಾರದ ರಾಜಧಾನಿ ಪುಷ್ಕಲಾವತಿ ಎಂಬುದನ್ನು ಸ್ಥಿರಪಡಿಸಿದ(1958). ತನ್ನ ಇಳಿವಯಸ್ಸಿ ನಲ್ಲಿಯೂ ಪುರಾತತ್ತ್ವ ಅಧ್ಯಯನ ಮತ್ತು ಉತ್ಖನನಗಳ ಬಗ್ಗೆ ಆಸಕ್ತಿ ವಹಿಸುತ್ತಿದ್ದು ಆಗಾಗ ಭಾರತ ಮತ್ತು ಪಾಕಿಸ್ತಾನಗಳಿಗೆ ಭೇಟಿ ನೀಡಿ ಸಲಹೆ, ಸಹಕಾರ ಕೊಡುತ್ತಿದ್ದ. 

	ಉತ್ತಮ ಭಾಷಣಕಾರನಾಗಿದ್ದ ಈತ ದೂರದರ್ಶನ ಮಾಧ್ಯಮ ದಲ್ಲಿಯೂ ಪುರಾತತ್ತ್ವ ಶಾಸ್ತ್ರವನ್ನು ಜನಪ್ರಿಯಗೊಳಿಸಿದ. ಈತ 1976 ಜುಲೈ 2ರಂದು ನಿಧನನಾದ.					
	(ಎಮ್.ಪಿ.ಎಮ್.ಎ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ